Thursday, September 1, 2016

"ಪುನರಪಿ": ಕಾವ್ಯ ಕಡಮೆ ನಾಗರಕಟ್ಟೆ - ನನ್ನ ಅನಿಸಿಕೆ

ಇತ್ತೀಚಿಗಷ್ಟೇ ನಾನು ಕಾವ್ಯ ಕಡಮೆ ನಾಗರಕಟ್ಟೆ ಬರೆದ "ಪುನರಪಿ" ಕಾದಂಬರಿಯನ್ನು ಓದಿ ಮುಗಿಸಿದೆ. ಇದು ನಾನು ಓದಿದ ಪ್ರಥಮ ಕನ್ನಡ ಕಾದಂಬರಿ. ಇದರ ಮುಂಚೆ ಲಲಿತ ಪ್ರಬಂಧಗಳ ಸಂಕಲನಗಳಷ್ಟೇ ಒಡ್ಡಿದ್ದೇ. ಈ ಪುಸ್ತಕದ ಬಿಡುಗಡೆಗೂ ನಾನು ಹೋಗಿದ್ದೆ. ನನ್ನ ಸ್ನೇಹಿತನಾದ ಸಂತೋಷ ನಾಗರಕಟ್ಟೆಯ ಜೀವನ ಸಂಗಾತಿಯಾದ ಕಾವ್ಯಳ ಪ್ರಥಮ ಕಾದಂಬರಿ ಯಾಗಿದ್ದರಿಂದ ಈ ಸಂತಸದ ಕ್ಷಣದಲ್ಲಿ ಭಾಗಿಯಾಗಬೇಕೆನಿಸಿತ್ತು. ಇದರಂತೆ ಅವರಿಬ್ಬರೂ ನನಗೆ ಕೊಟ್ಟ ಆಮಂತ್ರಣ ಸ್ವೀಕರಿಸಿ ಹೋಗಿದ್ದಕ್ಕೆ ಆಗಷ್ಟೇ ಬಿಡುಗಡೆಯಾದ ಪುಸ್ತಕದ ಪ್ರತಿಯಲ್ಲಿ ತಮ್ಮ ಶುಭಾಶಯಗಳೊಂದಿಗೆ ಸಹಿಯನ್ನು ಸಹ ಕೊಟ್ಟಿದ್ದರು. 

ಈ ಕಾದಂಬರಿಯಲ್ಲಿ ಕಾವ್ಯ ತೆಗೆದುಕೊಂಡಿರುವ ವಿಷಯಗಳನ್ನು ತುಂಬಾ ಚೆನ್ನಾಗಿ ಮೂಡಿಸಿದ್ದಾಳೆ. ವೃಧ್ದಪ್ಯ ಮತ್ತು ಸಲಿಂಗ ಕಾಮದ ವಿಷಯಗಳನ್ನು ಕೈಗೆತ್ತುಕೊಂಡು ಸುಲಲಿತವಾಗಿ ಕೃತಿಯನ್ನು ಮೂಡಿಸಿದ್ದಾಳೆ. ಕಥೆಯ ನಿರೂಪಣೆ ತುಂಬಾ ಅಚ್ಚುಕಟ್ಟಾಗಿದ್ದು ಕುರ್ಚಿಯ ಅಂಚಿನಲ್ಲಿ ಕೂತು ಕುತೂಹಲ ಕೆರಳಿಸುವಂತೆ ರಚಿಸಿದ್ದಾಳೆ. ಕಾದಂಬರಿಯಲ್ಲಿ ಬರುವ ಎಲ್ಲ ಪಾರ್ತ್ರಗಳು ತಮ್ಮ ತಮ್ಮ ಛಾಪುಗಳನ್ನು ಮನಸಿನಲ್ಲಿ ರೂಪಿಸುತ್ತ ನಡೆಯುತ್ತವೆ. ನನಗೆ ತುಂಬಾ ಕುತೂಹಲ ಕೆರಳಿಸಿದ ಪಾತ್ರವೆಂದರೆ ಸಂಜೀವಿನಿಯದ್ದು. ಪ್ರಾಯಶಃ ಆ ಪಾತ್ರದ ಬಗ್ಗೆ ಸ್ವಲ್ಪವೇ ಸ್ವಲ್ಪ ಮಾಹಿತಿ ಇರುವುದರಿಂದಾಗಿ ನನ್ನ ಮನಸಿನಲ್ಲಿ ಈ ಕುತೂಹಲವಿದ್ದರೂ ಇರಬಹುದು. ಇದೇ ಕಥೆಯ ಸಂಚನ್ನು ಮುಂದುವರೆಸಿ ಇನ್ನೂ ಬೆಳೆಸಬಹುದು ಅನ್ನುವುದು ನನ್ನ ಪ್ರಥಮ ಅನಿಸಿಕೆ. ಅಥವಾ, ಕಾದಂಬರಿಯ ಕೊನೆ ಸ್ವಲ್ಪ ವಿಭಿನ್ನವಾಗಿರಬಹುದಿತ್ತು ಅಂತಲೂ ಆನಿಸುತ್ತದೆ. ಪ್ರಾಯಶಃ ಈ ಅಂತ್ಯವನ್ನು ಇನ್ನೊಂದು ಕಾದಂಬರಿಯಾಗಿ ಮೂಡಿಸಬಹುದು. 

ಈ ಕಾದಂಬರಿಯು ಕಾವ್ಯಳ ಪ್ರಥಮ ಕಾದಂಬರಿ ಎಂಬ ಯೋಚಿಸಿದರೆ ಇದು ನಿಜಕ್ಕೂ ಒಂದು ಒಳ್ಳೆಯ ಪ್ರಯತ್ನ. ಇನ್ನೂ ಹೆಚ್ಚೆಚ್ಚು ಉತ್ತಮ ಕೃತಿಗಳನ್ನು ರಚಿಸಲಿ ಎಂದು ಹಾರೈಸುತ್ತೇನೆ. ಇಂತದ್ದೇ ಪ್ರಯೋಗಗಳು ಮುಂದುವರೆಯಲಿ ಎನ್ನುವುದೇ ನನ್ನ ಆಶಯ.

No comments: